ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದ ಪ್ರಜಾಧ್ವನಿ ಯಾತ್ರೆ ಸೋಮವಾರ ಹೊನ್ನಾಳಿಗೆ ಆಗಮಿಸಿತ್ತು. ಈ ವೇಳೆ ಭರ್ಜರಿ ರೋಡ್ ಶೋ ನಡೆಸಲಾಯಿತು. ಯಾತ್ರೆ ಆಗಮನ ಹಿನ್ನೆಲೆಯಲ್ಲಿ ಎಲ್ಲಾ ಕಡೆಗಳಲ್ಲಿ ಕಾಂಗ್ರೆಸ್ ಆಕಾಂಕ್ಷಿಗಳ ಬ್ಯಾನರ್‌ಗಳು ರಾರಾಜಿಸುತ್ತಿದ್ದವು.
ಸೋಮವಾರ ಮಧ್ಯಾಹ್ನ ಎಚ್. ಕಡದಕಟ್ಚೆಗೆ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ಹೊನ್ನಾಳಿ ತಾಲೂಕು ಕಾಂಗ್ರೆಸ್ ಮುಖಂಡರು ಅದ್ಧೂರಿಯಾಗಿ ಬರಮಾಡಿಕೊಂಡರು. ಎಚ್. ಕಡದಕಟ್ಟೆಯಿಂದ ರೋಡ್ ಶೋಅನ್ನು ವೇದಿಕೆಯವರೆಗೆ ನಡೆಸಲಾಯಿತು. ಈ ವೇಳೆ ಹೌದೋ ಹುಲಿಯಾ, ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಜೈ ಎನ್ನುವ ಘೋಷಣೆಗಳು ಮುಗಿಲು ಮುಟ್ಟಿದವು.
ಇನ್ನು ವೇದಿಕೆಯಲ್ಲಿ ಸಿದ್ದರಾಮಯ್ಯ ಮಾತನಾಡುವಾಗ ಕೆಲವರು ವೇದಿಕೆ ಮೇಲೆ ಬರಲು ಯತ್ನಿಸಿದರು. ಆಗ ಸಿಟ್ಟಾದ ಸಿದ್ದರಾಮಯ್ಯ ಏಯ್ ಅವನ್ಯಾರು. ಇಲ್ಲಿ ಯಾಕೆ ಬಂದ, ಕಳುಹಿಸು ಅವನನ್ನು ಎಂದು ಏರುಧ್ವನಿಯಲ್ಲಿ ಹೇಳಿದರು. ಸಿದ್ದರಾಮಯ್ಯ ಭಾಷಣ ಮಾಡುವಾಗ ಮುಂದೆ ಕುಳಿತಿದ್ದ ಕಾಂಗ್ರೆಸ್ ಕಾರ್ಯಕರ್ತರು ಹೌದೋ ಹುಲಿಯಾ ಎಂದು ಆಗಾಗ ಕೂಗುತ್ತಿದ್ದರು.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ ಕ್ರೆಡಿಟ್ ವಾರ್ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯಾಗಿದ್ದನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆ ಮಾಡಲು ನಿರ್ಧಾರ ಮಾಡಿ ಮಂಜೂರು ಮಾಡಿದ್ದು ನಾವು. ದಾಖಲೆ ಸಮೇತ ನಾವು ಬರುತ್ತೇವೆ. ಮಂಡ್ಯ ಸಂಸದೆ ಸುಮಲತಾ ಚರ್ಚೆಗೆ ಬೇಕಾದರೆ ಬರಲಿ ಎಂದು ಮಾಜಿ ಸಿದ್ದರಾಮಯ್ಯ ಪಂಥಾಹ್ವಾನ ನೀಡಿದರು. ಹೊನ್ನಾಳಿ ಪಟ್ಟಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಬೆಂಗಳೂರು – ಮೈಸೂರು ದಶಪಥ ರಸ್ತೆಯನ್ನಾಗಿಸಲು ಕ್ರಮ ಕೈಗೊಂಡಿದ್ದು ನಾವು ಎಂದು ಹೇಳಿದರು.
ಬೆಂಗಳೂರು- ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿ ಮಾಡಿದ್ದು ನಾವೇ. ಆಸ್ಕರ್ ಫರ್ನಾಂಡೀಸ್ ಕೇಂದ್ರ ಸಚಿವರಾಗಿದ್ದಾಗ ನಾನು ಮುಖ್ಯಮಂತ್ರಿ ಆಗಿದ್ದೆ. ಮಹಾದೇವಪ್ಪ ಹಾಗೂ ನಾನು ಆಸ್ಕರ್ ಅವರ ಕಚೇರಿಗೆ ಹೋಗಿ ರಾಜ್ಯ ಹೆದ್ದಾರಿಯಾಗಿದ್ದನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿಸಿ ಮಂಜೂರು ಮಾಡಿದೆವು. ಆದರೆ, ಬಿಜೆಪಿಯವರು ನಾವು ಮಾಡಿದ್ದು ಎನ್ನುತ್ತಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಮಂಜೂರು ಮಾಡಿದ್ದು ಎಂದು ತಿಳಿಸಿದರು.