ಕಾಂಗ್ರೆಸ್ ನಾಯಕರು ಪ್ರಚಾರಕ್ಕಾಗಿ ಡ್ರಾಮಾ ಆರಂಭಿಸಿದ್ದು, ಅದೊಂದು ಡ್ರಾಮಾ ಕಂಪನಿ. ಬಜೆಟ್ ಜನರಿಗೆ ತಲುಪದಂತೆ ಮಾಡಬೇಕೆನ್ನುವದು ಕಾಂಗ್ರೆಸ್ ಉದ್ದೇಶ. ಅದು ಈಡೇರದು. ಅವರಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ಬಳ್ಳಾರಿ: ರಾಜಕೀಯದಲ್ಲಿ ಸ್ನೇಹವನ್ನು ಪರಿಗಣಿಸುವುದಿಲ್ಲ. ಅಭಿವೃದ್ಧಿ ಕೆಲಸ ಮುಂದಿಟ್ಟುಕೊಂಡು ಜನರಿಂದ ಮತ ಕೇಳುತ್ತೇವೆ ಎಂದು ಸಚಿವ ಬಿ. ಶ್ರೀರಾಮುಲು (B Sriramulu) ಹೇಳಿದ್ದಾರೆ. ಜನಾರ್ದನ ರೆಡ್ಡಿ (Janardhan Reddy) ಹೊಸ ಪಕ್ಷ ಸ್ಥಾಪಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜಕೀಯ ಮತ್ತು ಸ್ನೇಹವನ್ನು ಒಂದೇ ತಕ್ಕಡಿಯಲ್ಲಿ ಇಟ್ಟುಕೊಳ್ಳುವುದಿಲ್ಲ. ರಾಜಕೀಯ ವಿಷಯದಲ್ಲಿ ನನ್ನದೇ ಆದ ಹೋರಾಟ ಇರುತ್ತದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ಬಿಜೆಪಿ (BJP) ಶಾಸಕರನ್ನು ಗೆಲಿಸುವುದು ನನ್ನ ಉದ್ದೇಶ. ಈ ವಿಷಯದಲ್ಲಿ ರಾಜಕೀಯವೇ ಮುಖ್ಯ ಸ್ನೆಹವಲ್ಲ ಎಂದು ಅವರು ಹೇಳಿದ್ದಾರೆ.
ನಮ್ಮದೇನಿದ್ದರೂ ಬಿಜೆಪಿ ಗೆಲುವಿನ ಯತ್ನ. ಸೋಮಶೇಖರ ರೆಡ್ಡಿ ಅವರ ಸ್ಪರ್ಧೆ ಬಗ್ಗೆ ಅನುಮಾನ ಬೇಡ. ಬಳ್ಳಾರಿ ನಗರದಿಂದಲೇ ಸ್ಪರ್ಧೆ ಮಾಡುತ್ತಾರೆ. ಚುನಾವಣೆ ದಿನಾಂಕ ಘೋಷಣೆ ಮಾಡಿದ ನಂತರ ಅಭ್ಯರ್ಥಿಗಳ ಘೋಷಣೆ ಮಾಡಲಾಗುವುದು. ಬಳ್ಳಾರಿ ಗ್ರಾಮೀಣ ಮತ್ತು ಸಂಡೂರು ಕ್ಷೇತ್ರದಿಂದ ಸ್ಪರ್ಧೆ ಮಾಡಲು ಬಯಸಿದ್ದೇನೆ ಅಂತಿಮವಾಗಿ ಪಕ್ಷದ ನಿರ್ಧಾರಕ್ಕೆ ಬದ್ಧ ಎಂದು ಅವರು ಹೇಳಿದ್ದಾರೆ.
ಫೆ. 23ಕ್ಕೆ ಸಂಡೂರಿಗೆ ಅಮಿತ್ ಶಾ
ಫೆಬ್ರವರಿ 23ಕ್ಕೆ ಸಂಡೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಲಿದ್ದಾರೆ. ಸಂಡೂರಿನಲ್ಲಿ ಸಾರ್ವಜನಿಕ ಸಮಾವೇಶ ಹಾಗೂ ತೋರಣಗಲ್ನಲ್ಲಿ ನಾಲ್ಕು ಜಿಲ್ಲೆ ಬಿಜೆಪಿ ಮುಖಂಡರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ಶ್ರೀರಾಮುಲು ತಿಳಿಸಿದ್ದಾರೆ.
ಕಾಂಗ್ರೆಸ್ ‘ಹೂ’ ಅಭಿಯಾನದ ವಿರುದ್ಧ ಟೀಕಾ ಪ್ರಹಾರ ನಡೆಸಿದ ಅವರು, ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಬಜೆಟ್ ಮಂಡನೆ ಮಾಡಿಲ್ಲ. ಅಭಿವೃದ್ಧಿಯ ಬಜೆಟ್ ಮಂಡನೆ ಮಾಡಲಾಗಿದೆ. ವಿಪಕ್ಷ ನಾಯಕರು ಬಜೆಟ್ ವೇಳೆ ಕಿವಿಯಲ್ಲಿ ಹೂ ಇಟ್ಟುಕೊಂಡು ಬಂದಿದ್ದರು. ಶಿಷ್ಟಾಚಾರ ಪಾಲಿಸದೆ ಅಗೌರವ ತೋರುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಕಾಂಗ್ರೆಸ್ ನಾಯಕರು ಪ್ರಚಾರಕ್ಕಾಗಿ ಡ್ರಾಮಾ ಆರಂಭಿಸಿದ್ದು, ಅದೊಂದು ಡ್ರಾಮಾ ಕಂಪನಿ. ಬಜೆಟ್ ಜನರಿಗೆ ತಲುಪದಂತೆ ಮಾಡಬೇಕೆನ್ನುವದು ಕಾಂಗ್ರೆಸ್ ಉದ್ದೇಶ. ಅದು ಈಡೇರದು. ಅವರಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.