ವಾಲ್ಮೀಕಿ ಜಾತ್ರೆಗೆ ಸುದೀಪ್ ಬಾರದ್ದಕ್ಕೆ ಫ್ಯಾನ್ಸ್ ಆಕ್ರೋಶ; ಕರೆದಿದ್ದರೆ ಖಂಡಿತ ಬರುತ್ತಿದ್ದೆ ಎಂದ ಸುದೀಪ್!

Byವರದಿಗಾರ

Feb 10, 2023

ಟ‌ ಕಿಚ್ಚ ಸುದೀಪ್ ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟು 27 ವರ್ಷಗಳನ್ನು ಪೂರೈಸಿರುವ ನಟ ಸುದೀಪ್ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಇರುವ ನಟ. ಇನ್ನು ನಟ ಸುದೀಪ್ ಅವರನ್ನು ಭೇಟಿ ಮಾಡಬೇಕೆಂಬುದು ಅವರ ಪ್ರತಿಯೊಬ್ಬ ಅಭಿಮಾನಿಯ ಆಶಯ.

ಹೀಗಾಗಿಯೇ ರಾಜ್ಯದ ವಿವಿಧ ಊರುಗಳಿಂದ ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಬೆಂಗಳೂರಿನವರೆಗೂ ಬರುವವರಿದ್ದಾರೆ.

ಹೀಗೆ ಕಿಚ್ಚನಿಗಾಗಿ ಬೆಂಗಳೂರಿವರೆಗೂ ಹುಡುಕಿಕೊಂಡು ಬರುವ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟ ತಮ್ಮ ಊರಿಗೇ ಬರಲಿದ್ದಾರೆ ಎಂದು ತಿಳಿದರೆ ಸುಮ್ಮನೆ ಇರುತ್ತಾರಾ? ಕಿಚ್ಚನ ಫೋಟೊ ಹಿಡಿದು, ನೆಚ್ಚಿನ ನಟನನ್ನು ಸ್ವಾಗತಿಸಲು ಬ್ಯಾನರ್ ಕಟ್ಟಿ, ಹೂವು, ಹಾರ ಸಿದ್ಧಪಡಿಸಿಕೊಂಡು ಕಾತರರಾಗಿ ಕಾಯುತ್ತಿರುತ್ತಾರೆ.

ಇದೇ ರೀತಿ ನಿನ್ನೆ ( ಫೆಬ್ರವರಿ 9 ) ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯಲ್ಲಿಯ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಜನ ಕಿಚ್ಚ ಸುದೀಪ್ ರಾಜನಹಳ್ಳಿಯಲ್ಲಿ ನಡೆದ ಜಾತ್ರಾ ಮಹೋತ್ಸವದ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ಕಾರ್ಯಕ್ರಮದಲ್ಲಿ ಜಮಾಯಿಸಿದ್ದರು. ನೆಚ್ಚಿನ ನಟನ ಆಗಮನಕ್ಕಾಗಿ ಕಾದು ಕುಳಿತು ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಕಿಚ್ಚ, ಕಿಚ್ಚ ಎಂದು ಘೋಷಣೆ ಕೂಗಲಾರಂಭಿಸಿದರು. ಇನ್ನು ಕಾರ್ಯಕ್ರಮ ಶುರುವಾಗಿ ಬಹಳ ಸಮಯ ಕಳೆದರೂ ಸುದೀಪ್ ಆಗಮನವಾಗದೇ ಇದ್ದದ್ದನ್ನು ಕಂಡ ಕಿಚ್ಚ ಸುದೀಪ್ ಅಭಿಮಾನಿಗಳು ಕಿಚ್ಚ ಎಲ್ಲಿ ಎಂದು ಘೋಷಣೆ ಕೂಗುತ್ತಾ ಕಾರ್ಯಕ್ರಮದ ಆಯೋಜಕರ ವಿರುದ್ಧ ಕಿಡಿಕಾರಿದರು. ಆದರೆ ಕಾರ್ಯಕ್ರಮ ಮುಗಿದರೂ ಸಹ ಕಿಚ್ಚ ಸುದೀಪ್ ಬರಲೇ ಇಲ್ಲ. ಇದರಿಂದ ಕೋಪಗೊಂಡ ಸುದೀಪ್ ಅಭಿಮಾನಿಗಳು ಅಲ್ಲಿದ್ದ ಕುರ್ಚಿಗಳನ್ನು ಹೊಡೆದುಹಾಕಿ ಆಕ್ರೋಶ ಹೊರಹಾಕಿದ್ರು. ಇನ್ನು ಸುದೀಪ್ ಈ ರೀತಿ ಯಾಕೆ ಮಾಡಿದ್ರು ಎಂಬ ಪ್ರಶ್ನೆಯೂ ಸಹ ಎದ್ದಿತ್ತು.

ಹೀಗೆ ಕಾರ್ಯಕ್ರಮಕ್ಕೆ ಬಾರದ ಕಿಚ್ಚ ಸುದೀಪ್ ವಿರುದ್ಧ ಅಭಿಮಾನಿಗಳು ಬೇಸರಗೊಂಡರು. ತಮ್ಮ ನೆಚ್ಚಿನ ನಟನನ್ನು ನೋಡಲು ಇಷ್ಟು ಕಾತರರಾಗಿದ್ದೇವೆ ಆದರೆ ಸುದೀಪ್ ಮಾತ್ರ ಕಾರ್ಯಕ್ರಮಕ್ಕೆ ಬಾರಲೇ ಇಲ್ಲ ಎಂದು ಬೇಸರ ಹೊರಹಾಕಿದ್ದರು. ಕಾರ್ಯಕ್ರಮ ಆಯೋಜಿಸಿದ್ದವರ ವಿರುದ್ಧ ಘೋಷಣೆ ಕೂಗಿದ ಸುದೀಪ್ ಅಭಿಮಾನಿಗಳು ತಮ್ಮಲ್ಲಿದ್ದ ನೋವನ್ನು ಈ ಮೂಲಕ ಹೊರಹಾಕಿದ್ರು. ವಾಲ್ಮೀಕಿ ಪೀಠಾಧಿಪತಿ ಪ್ರಸನ್ನಾನಂದಪುರಿ ಸ್ವಾಮೀಜಿ ಕಾರ್ಯಕ್ರಮದ ಮಧ್ಯದಲ್ಲಿ ಸುದೀಪ್ ಇನ್ನೇನು ಬರಲಿದ್ದಾರೆ ಎಂದು ನೀಡಿದ್ದ ಹೇಳಿಕೆಯಿಂದ ಕಿಚ್ಚ ಬಂದೇ ಬರುತ್ತಾರೆ ಎಂದು ಕಾಯುತ್ತಿದ್ದ ಅಭಿಮಾನಿಗಳು ಕೊನೆಗೆ ಕಿಚ್ಚನನ್ನು ನೋಡಲಾಗದೇ ಆಕ್ರೋಶ ಹೊರಹಾಕಿ ಸಪ್ಪೆ ಮುಖ ಹಾಕಿಕೊಂಡು ಮನೆಗಳತ್ತ ತೆರಳಿದರು.

ಸ್ಪಷ್ಟನೆ ನೀಡಿದ ಸುದೀಪ್

ಹೀಗೆ ತಾವು ಕಾರ್ಯಕ್ರಮಕ್ಕೆ ಬರದಿದ್ದ ಕಾರಣದಿಂದಾಗಿ ತಮ್ಮ ಅಭಿಮಾನಿಗಳು ಆಕ್ರೋಶ ಹೊರಹಾಕಿದ ಸುದ್ದಿ ಕಿವಿಗೆ ಬಿದ್ದೊಡನೆ ಮಧ್ಯರಾತ್ತಿ ಟ್ವೀಟ್ ಮಾಡಿರುವ ಸುದೀಪ್ ತನಗೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ಯಾವುದೇ ರೀತಿಯ ಆಹ್ವಾನ ಬಂದಿಲ್ಲ ಎಂದಿದ್ದಾರೆ. “ಸ್ನೇಹಿತರಿಗೆ ನಲ್ಮೆಯ ನಮಸ್ಕಾರ -ದಾವಣಗೆರೆಯ ಜಿಲ್ಲೆಯ ರಾಜನಹಳ್ಳಿಯ ಘಟನೆ ತಿಳಿದು ಬೇಸರವಾಯಿತು.ನನಗೆ ಕಾರ್ಯಕ್ರಮದ ಆಯೋಜಕರಿಂದ ಆಹ್ವಾನವಿರಲಿಲ್ಲ.ಕಾರ್ಯಕ್ರಮದ ಕುರಿತು ಮಾಹಿತಿಯೂ ಇರಲಿಲ್ಲ.ನಾನು ಒಪ್ಪಿಕೊಂಡ ಕಾರ್ಯಕ್ರಮಗಳನ್ನು ತಪ್ಪಿಸಿದವನಲ್ಲ. ಆದರೂ ಇಂದು ನಡೆದ ಘಟನೆಯ ಬಗ್ಗೆ ತೀವ್ರ ವಿಷಾದವಿದೆ.ನಿಮ್ಮ ಜೊತೆ ಬೆರೆಯಲು ನನಗೂ ಸದಾ ಆತೀವ ಆಸೆ.. ಮುಂದೆ ಖಂಡಿತ ಬರುವೆ. ಪ್ರೀತಿ ಇರಲಿ. ಶಾಂತರೀತಿಯಿಂದ ವರ್ತಿಸಿ. ಪ್ರೀತಿಯೊಂದಿಗೆ ನಿಮ್ಮ ಕಿಚ್ಚ….” ಎಂದು ಬರೆದುಕೊಂಡಿದ್ದಾರೆ.

ಅಭಿಮಾನಿಗಳಲ್ಲಿ ಶುರು ಗೊಂದಲ

ಇತ್ತ ಕಿಚ್ಚ ಸುದೀಪ್ ನನಗೆ ಆಹ್ವಾನವೇ ಇರಲಿಲ್ಲ, ಇದ್ದಿದ್ದರೆ ಬರುತ್ತಿದ್ದೆ ಎಂದು ಟ್ವೀಟ್ ಮಾಡಿದ್ದರೆ, ಅತ್ತ ವಾಲ್ಮೀಕಿ ಪೀಠಾಧಿಪತಿ ಪ್ರಸನ್ನಾನಂದಪುರಿ ಸ್ವಾಮೀಜಿ ಹಾಗೂ ಆಯೋಜಕರು ಸುದೀಪ್ ಬರಲಿದ್ದಾರೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದರಂತೆ. ಸದ್ಯ ಈ ಎರಡು ಹೇಳಿಕೆಗಳಿಂದ ಅಲ್ಲಿನ ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿರುವುದಂತೂ ಖಚಿತ.