ರಾಮುಲುಗೆ ಹೈಕಮಾಂಡ್ ದೊಡ್ಡ ಟಾಸ್ಕ್​.. ಮೂವರು ಬಲಿಷ್ಠ ವಿರೋಧಿಗಳ ಎದುರಿಸೋದೇ ದೊಡ್ಡ ಸವಾಲ್..!

Byವರದಿಗಾರ

Feb 6, 2023

2023ರ ಚುನಾವಣೆ ದಿನೇ ದಿನೇ ರಂಗೇರ್ತಿದೆ. ಎಲ್ಲಾ ಪಕ್ಷಗಳು ಚಳಿ-ಬಿಸಿಲೆನ್ನದೇ ಯಾತ್ರೆ ಮಾಡ್ತಿದ್ದು, ಎಲೆಕ್ಷನ್​​​ ಗೆಲ್ಲಲು ತಂತ್ರ-ಪ್ರತಿತಂತ್ರ ರೂಪಿಸ್ತಿವೆ. ಆದ್ರೆ ಖರ್ಗೆ ಕೋಟೆ ಕಲ್ಯಾಣ ಕರ್ನಾಟಕದಲ್ಲಿ ಅಸೆಂಬ್ಲಿ ಚುನಾವಣೆ ಬಿಜೆಪಿ ಪಾಲಿಗೆ ಈಗಲೂ ಕಬ್ಬಿಣದ ಕಡಲೆ.

ಹೀಗಾಗಿ ಕಲ್ಯಾಣ ಕ್ರಾಂತಿಗಾಗಿ ಈ ಭಾಗದ ಕೇಸರಿ ಸೇನೆಗೆ ಹೊಸ ದಂಡನಾಯಕನಿಗೆ ಹೊಣೆ ಹೊರೆಸಿದೆ. ಸಚಿವ ಶ್ರೀರಾಮುಲುಗೆ ಹೈಕಮಾಂಡ್​​​ ಹೊಸ ಟಾಸ್ಕ್​ ನೀಡಿದೆ.

2023ರ ಚುನಾವಣೆಯಲ್ಲಿ ಬಿಜೆಪಿ ಪ್ಯಾನ್​ ಕರ್ನಾಟಕ ಪ್ಲಾನ್​ ಮಾಡ್ತಿದೆ. ದಕ್ಷಿಣದ ಹೆಬ್ಬಾಗಿಲನ್ನ ಉಳಿಸಿಕೊಳ್ಳಲು ರಣತಂತ್ರಗಳನ್ನ ರೂಪಿಸ್ತಿರುವ ಕೇಸರಿಸೇನೆ ಪ್ರದೇಶವಾರು ಜವಾಬ್ದಾರಿಗಳನ್ನ ಹೊರೆಸ್ತಿದೆ. ಅದರಲ್ಲೂ ದಶಕಗಳಿಂದಲೂ ಕಾಂಗ್ರೆಸ್​​​ನ ಭದ್ರಕೋಟೆ ಕಲ್ಯಾಣ ಕರ್ನಾಟಕವನ್ನ ಈ ಸಲ ಬಿಜೆಪಿ ಹೆಚ್ಚು ಫೋಕಸ್​ ಮಾಡ್ತಿದೆ. ಇದರ ಭಾಗವಾಗಿ ಶ್ರೀರಾಮುಲುಗೆ ದೊಡ್ಡ ಟಾಸ್ಕ್​ ನೀಡಲಾಗಿದೆ.

‘ಕಲ್ಯಾಣ ಕ್ರಾಂತಿ’ಗಾಗಿ ಟಾಸ್ಕ್​​​ ಪಡೆದ ಸಾರಿಗೆ ಮಂತ್ರಿ..!
ಬಿ.ಶ್ರೀರಾಮುಲು ಬಿಜೆಪಿ ಸೆಕೆಂಡ್​ ಜನರೇಷನ್​ ಮಾಸ್​ ಲೀಡರ್​. ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕ ಸಚಿವ ಶ್ರೀರಾಮುಲು ಕಲ್ಯಾಣ ಕರ್ನಾಟಕದ ಹಾರ್ಟ್​​ಲ್ಯಾಂಡ್​​ನಲ್ಲಿ ರಾಜಕಾರಣ ಮಾಡಿದವ್ರು. ಲಿಂಗಾಯತ ಜತೆ ಅಹಿಂದ ಮತಗಳನ್ನೇ ಉಸಿರಾಡುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ವಾಲ್ಮೀಕಿ ಸಮುದಾಯದ ಮತಬ್ಯಾಂಕ್​​ ಸಾಕಷ್ಟು ಗಟ್ಟಿ ಆಗಿದೆ. ಆ ಕಾರಣಕ್ಕೆ ಎಸ್​​​ಟಿ ಮೀಸಲು ಕ್ಷೇತ್ರಗಳಲ್ಲಿ ಬಳ್ಳಾರಿ ಚತುರನ ಚರಿಶ್ಮಾ ಬಳಕೆಗೆ ಬಿಜೆಪಿ ಮುಂದಾಗಿದೆ.

2023ರ ವಿಧಾನಸಭಾ ಚುನಾವಣೆ ಹತ್ತಿರವಾಗ್ತಿದ್ದು, ಕಲ್ಯಾಣ ಕರ್ನಾಟಕ ಭಾಗಕ್ಕೆ ರಾಮುಲುಗೆ ಚಿತ್ತ ವಹಿಸಲು ಹೈಕಮಾಂಡ್ ನಾಯಕರ ಸೂಚನೆ ನೀಡಿದೆ. ಇದೇ ಕಾರಣಕ್ಕೆ ಮೊಳಕಾಲ್ಮೂರು ಕ್ಷೇತ್ರದಿಂದ ರಾಮುಲು ಮುಂದಿನ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯ ಕಡೆ ಶಿಫ್ಟ್ ಆಗ್ತಿದ್ದಾರೆ. ಎಲೆಕ್ಷನ್​​​ನಲ್ಲಿ ಬಳ್ಳಾರಿಯ ಯಾವುದಾದ್ರೊಂದು ಕ್ಷೇತ್ರ ನೋಡಿಕೊಳ್ಳುವಂತೆ ವರಿಷ್ಠರು ಆಜ್ಞೆ ಹೊರಡಿಸಿದ್ದಾರೆ.

ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳಲು ವ್ಯೂಹ

ಕಿತ್ತೂರು, ಕಲ್ಯಾಣ ಕರ್ನಾಟಕ, ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಗೆದ್ದಾಗೊಮ್ಮೆ ರಾಜ್ಯದಲ್ಲಿ ಗದ್ದುಗೆ ಸಿಕ್ಕ ಉದಾಹರಣೆಗಳು ಸಾಕಷ್ಟಿದೆ. ಒಂದು ಭಾಗ ಕೈಕೊಟ್ಟಾಗೊಮ್ಮೆ ಅತಂತ್ರ ವಿಧಾನಸಭೆ ನಿರ್ಮಾಣ ಆಗಿದೆ. ಹೀಗಾಗಿ ಕಲ್ಯಾಣದಲ್ಲಿ ಭದ್ರವಾಗಿ ಬೇರೂರಿರುವ ಕಾಂಗ್ರೆಸ್​​ಗೆ ಪೆಟ್ಟು ನೀಡುವ ಉದ್ದೇಶ ಬಿಜೆಪಿ ಹೊಂದಿದೆ. ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ಹೊಣೆ ರಾಮುಲುಗೆ ವಹಿಸಲಾಗ್ತಿದೆ. ಈ ಮೂಲಕ ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳಲು ವ್ಯೂಹ ಸಿದ್ಧಪಡಿಸಿದೆ.

ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ನಾಯಕತ್ವ ಕೊರೆತೆಯಿದ್ದು, ಶ್ರೀರಾಮುಲು ಮೂಲಕ ಶಕ್ತಿ ತುಂಬಲು ಬಿಜೆಪಿ ರಾಜಕೀಯ ದಾಳ ಉರುಳಿಸಿದೆ. ಇದೇ ಕಾರಣಕ್ಕೆ ಬಳ್ಳಾರಿ ಗ್ರಾಮೀಣ ಅಥವಾ ಸಂಡೂರು ಮೀಸಲು ಕ್ಷೇತ್ರದಿಂದ ಕಣಕ್ಕಿಳಿಯಲು ಶ್ರೀರಾಮುಲು ಸಿದ್ಧತೆ ನಡೆಸಿದ್ದಾರೆ. ಈ ಆಯ್ಕೆ ಕ್ಷೇತ್ರ ಪ್ರಚಾರದ ಅಗತ್ಯತೆ ಕಮ್ಮಿ ಆಗಲಿದ್ದು, ಕಲ್ಯಾಣ ಕರ್ನಾಟಕ ಸುತ್ತಲು ಅನುಕೂಲ ಆಗಲಿದೆ.

 

ರಾಮುಲು ಟಾಸ್ಕ್​​ ನೀಡುವ ಹಿಂದೆ ಹಲವು ತಂತ್ರಗಾರಿಕೆ ಇದೆ. ರಾಮುಲು ಆಪ್ತ ಮಿತ್ರ ಜನಾರ್ದನ ರೆಡ್ಡಿ ಈಗಾಗಲೇ ಹೊಸ ಪಕ್ಷ ಕಟ್ಟಿ ಕಲ್ಯಾಣದಲ್ಲಿ ಸಂಚಲನ ಮೂಡಿಸಿದ್ದಾರೆ. ಬಿಜೆಪಿ ಮತಬ್ಯಾಂಕ್​​​ಗೆ ರೆಡ್ಡಿ ಪಡೆ ಕನ್ನ ಹಾಕುವ ಆತಂಕ ಕೇಸರಿ ಸೇನೆಯನ್ನ ಕಂಗೆಡೆಸಿದೆ. ಅಲ್ಲದೆ, ಕೆಲವು ಕ್ಷೇತ್ರಗಳಲ್ಲಿ ತೆನೆ ಕೂಡ ಬಲಿಷ್ಠವಾಗಿದ್ದು, ಈ ಮೂರು ವಿರೋಧಿಗಳನ್ನ ಬಗ್ಗುಬಡಿಲು ರಾಮುಲು ಫೇಸ್​ ಬಿಜೆಪಿಗೆ ಅನಿವಾರ್ಯ ಆಗಿದೆ.